ಭೀಷ್ಮ ಸಾಹನಿ
1915. ಹಿಂದಿ ಸಾಹಿತಿ ಹಾಗೂ ಕಾದಂಬರಿಕಾರ. ಪ್ರೇಮಚಂದರು ಆರಂಭಿಸಿದ ಪ್ರಗತಿಶೀಲ ಆಂದೋಲನವನ್ನು ಮುಂದವರಿಸಿಕೊಂಡು ಬಂದು ಸ್ವಾತಂತ್ರ್ಯೋತ್ತರ ಭಾರತದ ಯಥಾರ್ಥಗಳನ್ನು ತಮ್ಮ ಕೃತಿಗಳ ಮೂಲಕ ಸಮರ್ಥವಾಗಿ ಅಭಿವ್ಯಕ್ತಿಸಿದ ಭೀಷ್ಮಸಾಹನಿ ಭಾರತದ ಜನವಾದಿ ಲೇಖಕರು. ಹುಟ್ಟಿದ್ದು ರಾವಲ್ಪಿಂಡಿಯಲ್ಲಿ. ಲಾಹೋರಿನಲ್ಲಿ ಬಿ.ಎ, ಎಂ.ಎ ಪಡೆದು ಮುಂದೆ ಪಿಎಚ್.ಡಿ. ಪದವಿ ಪಡೆದರು.

	ದೇಶದ ವಿಭಜನೆಯ ಮೊದಲು ಅನಂತರ ಮುಂಬಯಿ ಬಳಿಕ ದೆಹಲಿಯಲ್ಲಿ ಕಾಲೇಜು ಅಧ್ಯಾಪಕರಾದರು. ಇವರ ಮೊದಲ ಕಥಾಸಂಗ್ರಹ ಭಾಗ್ಯವಕ್ರ 1953ರಲ್ಲಿ ಪ್ರಕಟವಾಯಿತು. 1957ರಲ್ಲಿ ಇವರು ಮಾಸ್ಕೋದ ವಿದೇಶಿ ಭಾಷಾಪ್ರಕಾಶನ ಸಂಸ್ಥೆಯಲ್ಲಿ ಅನುವಾದಕರಾಗಿ ನೇಮಕಗೊಂಡು, ಅಲ್ಲಿಂದ ಏಳು ವರ್ಷಗಳ ಅವಧಿಯಲ್ಲಿ ಟಾಲ್‍ಸ್ಟಾಯ್, ನಿಕೋಲಾಯ್ ಆಸ್ತ್ರಾವಸ್ಕಿ, ಆಯಿತ್ಮಾತೋವ್ ಅವರ ಕಾದಂಬರಿಗಳೂ ಸೇರಿದಂತೆ ಸುಮಾರು ಇಪ್ಪತ್ತು ರಶ್ಯನ್ ಕೃತಿಗಳನ್ನು ಹಿಂದಿಗೆ ಅನುವಾದಿಸಿದರು.

	ಭೀಷ್ಮ ಸಾಹನಿಯವರು ಗಾಂಧೀ ವಿಚಾರಧಾರೆಗಳಿಂದ ಆಕರ್ಷಿತರಾದ ಲೇಖಕರು. ದೇಶದ ಸ್ವಾತಂತ್ರ್ಯದ ಹೋರಾಟದಲ್ಲಿ ಎಲ್ಲ ಯುವಕರು ಭಾವಾವೇಶದಿಂದ ಸ್ವಾತಂತ್ರ್ಯದ ಪಂಜುಹಿಡಿದು ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದಂತೆ ಭೀಷ್ಮ ಸಾಹನಿಯವರು ಸ್ವಾತಂತ್ರ್ಯದ ಆಂದೋಲನದಲ್ಲಿ ಭಾಗಿಯಾಗಿ, ಕಾಂಗ್ರೆಸ್ಸಿನ ಸಕ್ರಿಯ ಸದಸ್ಯರಾಗಿ ದುಡಿದವರು. ಪಾಮ್‍ದತ್ತರ ರ್ಯೆಸ್ ಆಫ್ ನೇಷನಲಿಸಮ್ ಇನ್ ಯೂರೊಪ್ ಗ್ರಂಥ ಓದಿ ಅನಂತರ ಮಾಕ್ರ್ಸ್‍ವಾದದ ಬಗೆಗೆ ಒಲವು ಬೆಳೆಸಿಕೊಂಡರು.

	ಸಾಹಿತ್ಯ ಮತ್ತು ಬದುಕನ್ನು ಕುರಿತಂತೆ ಭೀಷ್ಮ ಸಾಹನಿಯವರ ವಿಚಾರಗಳು ತುಂಬ ಸ್ಪಷ್ಟವಾಗಿವೆ. ಸಾಹಿತ್ಯ ಬದುಕಿನ ಒಂದು ಸೃಷ್ಟಿ. ಇದು ಅನುಭವ ಪ್ರೇರಕವಾದದ್ದು ಹಾಗೂ ಈ ಅನುಭವಗಳೇ ಅವನಿಗೊಂದು ಜೀವನದೃಷ್ಟಿಯನ್ನು ಪ್ರದಾನ ಮಾಡುತ್ತವೆ ಎಂಬುದು ಇವರ ಅಚಲ ನಂಬಿಕೆ.

	ಬದುಕನ್ನು ಅನನ್ಯ ಪ್ರೀತಿಯಿಂದ ಆರಾಧಿಸುವ ಭೀಷ್ಮ ಸಾಹನಿಯವರು ಸಾಹಿತ್ಯದಲ್ಲಿ ಚಿತ್ರಿಸಲಾಗಿರುವ ಹಳ್ಳಿಗಳು, ನಗರಗಳು. ಮಹಾನಗರಗಳು, ಮಧ್ಯಮ ಕೆಳವರ್ಗದ ಕುಟುಂಬಗಳು. ಒಂದೊಂದೂ ಸಮಗ್ರ ಭಾರತದ ಚಿತ್ರವನ್ನೇ ನೀಡುತ್ತವೆ. ಏಕೆಂದರೆ ಇಲ್ಲೆಲ್ಲ ಅವರು ನೀಡಿರುವುದು. ತಟಸ್ಥ ಹಾಗೂ ವಸ್ತುನಿಷ್ಠ ಚಿತ್ರಣ.

	ಇವರ ಕತೆ, ಕಾದಂಬರಿಗಳಲ್ಲಿ ಮಧ್ಯಮವರ್ಗದ ಎಲ್ಲ ಸಂಕಟಗಳು, ಪ್ರೀತಿ ದ್ವೇಷಗಳು, ಅಂತರ್ವಿರೋಧಗಳು ಅಭಿವ್ಯಕ್ತಗೊಂಡಿರುವಂತೆ, ಬಂಡವಾಳಶಾಹಿ, ಸಾಮಾಜಿಕ ವ್ಯವಸ್ಥೆ ಮತ್ತು ಆಧುನಿಕತೆಯ ಮಧ್ಯೆ ಸಿಕ್ಕಿಕೊಂಡು ತೊಳಲಾಡುವ ಮಧ್ಯಮವರ್ಗದವರ ತುಡಿತಗಳಿಗೆ ಸಂವೇದನೆಗಳಿಗೆ ಅಭಿವ್ಯಕ್ತಿ ನೀಡಿದ್ದಾರೆ. ಅಂತೆಯೇ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ರಾಜಕೀಯ ಸ್ಥಿತಿಗಳು, ಸ್ಥಾಪಿತ ಆದರ್ಶಗಳು ಭ್ರಮನಿರಸನಗೊಂಡ ಆದರ್ಶಗಳು, ಶೋಷಕರು ಮತ್ತು ಶೋಷಿತರು, ಸಾಂಪ್ರದಾಯಿಕ ಜಾತಿ ಧರ್ಮಗಳು, ದಂಗೆಗಳು, ಅಧಿಕಾರಶಾಹಿ, ನೌಕರಶಾಹಿ ವ್ಯವಸ್ಥೆ. ಆಗಿನ ಸ್ಥಿತ್ಯಂತರ ಸಮಾಜದ ಸಾಮಾಜಿಕ, ಆರ್ಥಿಕ ಮೌಲ್ಯಗಳ ವಿಶ್ಲೇಷಣೆ ಅದರಲ್ಲೂ ಮುಖ್ಯವಾಗಿ ವಿಭಜನೆಯ ಅನಂತರದ ಜನ ಜೀವನ ಹಾಗೂ ಆ ಜನರ ಕನಸುಗಳು ಭೀಷ್ಮ ಸಾಹನಿಯವರ ಸೃಜನ ಪ್ರಪಂಚದಲ್ಲಿ ದಟ್ಟವಾಗಿ ಚಿತ್ರಿತಗೊಂಡಿರುವುದನ್ನು ಕಾಣಬಹುದಾಗಿದೆ.

	ಝರೋಖೆ, ಕಡಿಯಾಮ್, ತಮಸ್, ವಸಂತಿ ಇವು ಭೀಷ್ಮ ಸಾಹನಿಯವರ ಕಾದಂಬರಿಗಳು.

	ಝರೋಖೆ ಕಾದಂಬರಿಯ ವಸ್ತು ಬಾಲಮನೋವಿಜ್ಞಾನ ಕುರಿತದ್ದು. ವ್ಯಕ್ತಿಯ ಸಹಜ ಪ್ರವೃತ್ತಿಗಳ ದಮನದಿಂದ ಮನುಷ್ಯನ ವಿಕಾಸ ಹೇಗೆ ಕುಂಠಿತಗೊಳ್ಳುತ್ತದೆ, ಧರ್ಮ, ದರ್ಶನ, ನೈತಿಕತೆಯ ಹೆಸರಿನಲ್ಲಿ ಮಕ್ಕಳಿಗೆ ಚಿಕ್ಕಂದಿನಲ್ಲಿ ಕೊಡಲಾಗುವ ಸಂಸ್ಕಾರಗಳು ಬದುಕಿನ ಬಗ್ಗೆ ನಕಾರಾತ್ಮಕ ಧೋರಣೆ ಬೆಳೆಯಲು ಹೇಗೆ ಸಹಕಾರಿಯಾಗುತ್ತವೆ ಎಂಬುದನ್ನು ಅತ್ಯಂತ ಮನೋಜ್ಞ ರೀತಿಯಲ್ಲಿ ಚಿತ್ರಿಸಿದ್ದಾರೆ.

	ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪುರಸ್ಕøತಗೊಂಡಿರುವ ಇವರ 'ತಮಸ್ ಶ್ರೇಷ್ಠ ಕಾದಂಬರಿ; ಭಾರತೀಯ ಕಾದಂಬರಿ ಪ್ರಪಂಚಕ್ಕೆ ಮಹತ್ತರ ಕೊಡುಗೆ. ಭಾರತ-ಪಾಕಿಸ್ತಾನ ವಿಭಜನೆಯಿಂದಾಗಿ ತಮ್ಮ ಮನೆ ಮಠಗಳನ್ನು ತೊರೆದು ಸ್ಥಳಾಂತರಗೊಂಡ ಲಕ್ಷಾಂತರ ಮಂದಿಯ ತೀವ್ರ ಸಂಘರ್ಷದ ಕಥೆ ತಮಸ್. ಧರ್ಮಾಂಧತೆ, ಅಮಾನವೀಯತೆ ಹಾಗೂ ಕ್ರೂರತೆಯನ್ನು ಈ ಕಾದಂಬರಿಯಲ್ಲಿ ವಾಸ್ತವ ನೆಲಗಟ್ಟಿನ ಮೇಲೆ ಚಿತ್ರಿಸಲಾಗಿದೆ.

	ಕಡಿಯಾಮ್ ಕಾದಂಬರಿ ಬದುಕಿನ ಆಡಂಬರ ಮಿಥ್ಯಾದರ್ಶಗಳು, ಟೊಳ್ಳು ಸಿದ್ದಾಂತಗಳನ್ನು ತೀವ್ರ ವೈಚಾರಿಕ ನಿಕಷದ ಮೇಲೆ ಒರೆಹಚ್ಚುತ್ತದೆ. ವಸಂತಿ ಕಾದಂಬರಿ ನಿಮ್ನ ವರ್ಗದ ದಲಿತರ ಬದುಕನ್ನು ಸಮರ್ಥವಾಗಿ ಬಣ್ಣಿಸಿದೆ.

	ಕತೆಗಾರರಾಗಿ ಭೀಷ್ಮ ಸಾಹನಿ ಹಿಂದಿಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಭಾಗ್ಯರೇಖಾ, ಪೆಹಲಾ ಪಾಠ್, ಭಟಕತೀ ರಾಖ್, ಖಂಡಹರ್, ಸಟರಿಯಾಮ್, ವಾಂಗ್ಚೂ ಇವರ ಕಥಾ ಸಂಗ್ರಹಗಲ್ಲಿ ಕೆಲವು.

	ನಾಟಕ ಪ್ರಕಾರದಲ್ಲೂ ಇವರು ತಮ್ಮ ಪ್ರತಿಭೆ ಮೆರೆದಿದ್ದಾರೆ. 1977ರಲ್ಲಿ ಪ್ರಕಟವಾದ ಹಾನೂಶ್ ಹಿಂದಿಯಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಮಹತ್ತ್ವದ ಕೃತಿಗಳಲ್ಲೊಂದು. ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕುಠಾರೋಪಾದಿಯಲ್ಲಿ ಬರುವ ಶಾಸನ ವ್ಯವಸ್ಥೆಯನ್ನು ಕಲಾತ್ಮಕವಾಗಿ ವಿಡಂಬಿಸುತ್ತದೆ.

	ಕಬೀರ್ ಖಡಾ ಬಾಜಾರ್ ಮೇ ಭೀಷ್ಮ ಸಾಹನಿಯವರ ಇನ್ನೊಂದು ನಾಟಕ. ಈ ನಾಟಕದಲ್ಲಿ ಕಬೀರ್ ಕಾಲದ ಈ ನಾಟಕದಲ್ಲಿ ಕಬೀರ್ ಕಾಲದ ಸಾಮಾಜಿಕ ಸ್ಥಿತಿಗತಿಗಳನ್ನು, ಆತನ ಬದುಕಿನ ಸಿದ್ಧಿ ಸಾಧನೆಗಳನ್ನು ಕಬೀರನ ರಚನೆಗಳಲ್ಲೂ ಅಷ್ಟಾಗಿ ಕಾಣದ ಆತನ ಪತ್ನಿ ಮತ್ತು ತಾಯಿಯ ಪಾತ್ರಗಳನ್ನು ಮನ ಮಿಡಿಯುವಂತೆ ಚಿತ್ರಿಸಲಾಗಿದೆ.

	ಸುಪ್ರಸಿದ್ಧ ಹಿಂದಿ ಚಲನಚಿತ್ರ ನಟ. ಕತೆಗಾರ ಬಲರಾಜ ಸಾಹನಿ ಭೀಷ್ಮ ಸಾಹನಿಯವರ ಅಣ್ಣ. ಬಲರಾಜರ ವ್ಯಕ್ತಿತ್ವ ಮತ್ತು ಕಲಾಪ್ರತಿಭೆಯಿಂದ ಭೀಷ್ಮ ಸಾಹನಿ ಚಿಕ್ಕಂದಿನಿಂದಲೂ ಪ್ರಭಾವಿತರಾಗಿದ್ದಾರೆ. ತಮ್ಮ ಅಣ್ಣನನ್ನು ಕುರಿತು ಮೇರೇ ಬಾಯಿ ಬಲರಾಜ್ ಎಂಬ ಜೀವನ ಚರಿತ್ರೆ ಬರೆದಿದ್ದಾರೆ. ಇದು ಬಲರಾಜರ ಜೀವನದ ಘಟನೆಗಳನ್ನು ಮಾತ್ರ ಬರೆದಿರುವ ಬಾಷ್ಪಾಂಜಲಿಯಾಗಿರದೆ ಆ ನಟನ ಸಿದ್ಧಿಸಾಧನೆಗಳನ್ನು, ಆತ ಎದುರಿಸಿದ ಬದುಕಿನ ಸಂಘರ್ಷಗಳನ್ನು ವಸ್ತುನಿಷ್ಠವಾಗಿ ನಿರೂಪಿಸುವ ಪುಸ್ತಕವೂ ಆಗಿದೆ.

	1965ರಲ್ಲಿ ಭೀಷ್ಮ ಸಾಹನಿ ನಯೀ ಕಹಾನಿಯಾಮ್ ಎಂಬ ಪತ್ರಿಕೆಯನ್ನು ಸಂಪಾದಿಸಿದರು. ಇದು ಸುಮಾರು ಎರಡೂವರೆ ವರ್ಷಗಳ ಕಾಲ ನಡೆದು ನಿಂತುಹೋಯಿತು. ಮಕ್ಕಳಿಗಾಗಿಯೂ ಇವರು ಕತೆಗಳನ್ನು ಬರೆದು ಪ್ರಕಟಿಸಿದ್ದಾರೆ. ತಾಮಸ್ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.	
(ಟಿಎಚ್‍ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ